ಅಜೀಲಿಯ
	ಎರಿಕೇಸೀ ಕುಟುಂಬಕ್ಕೆ ಸೇರಿದ ಸುಂದರ ಸಸ್ಯ. ಇದರ ಅನೇಕ ಪ್ರಭೇದಗಳು ಹೆಚ್ಚಾಗಿ 200ಮೀ. ಎತ್ತರವಿರುವ ತಂಪಾದ ಸಹ್ಯಾದ್ರಿ, ಹಿಮಾಲಯ, ಊಟಿಗಳಂಥ ಪ್ರದೇಶಗಳಲ್ಲಿ ಸ್ವಾಭಾವಿಕವಾಗಿ ಸಣ್ಣ ಮರಗಳಾಗಿ ಬೆಳೆಯುತ್ತವೆ. ಇದರ ಸಮೀಪ ಬಂಧು ರೋಡೋಡೆಂಡ್ರಾನ್. ಇವೆರಡೂ ಒಂದೇ ಜಾತಿಯವೆಂಬುದು ಸಸ್ಯಶಾಸ್ತ್ರಜ್ಞರ ಅಭಿಪ್ರಾಯ. ಅeóÉೀಲಿಯಾದ ಸುಮಾರು 850 ಪ್ರಭೇದಗಳು ಪ್ರಪಂಚದ ನಾನಾ ಭಾಗಗಳಲ್ಲಿ ಹರಡಿಕೊಂಡಿವೆ. ಚೀನದ ಪಶ್ಚಿಮ ಭಾಗದಲ್ಲಿರುವ ಯುನಾನ್ ಎಂಬ ಸಣ್ಣ ಪ್ರದೇಶವೊಂದರಲ್ಲಿಯೇ ಸುಮಾರು 200 ಪ್ರಭೇದಗಳು ಕಂಡು ಬರುವುದರಿಂದ, ಅದೇ ಈ ಸಸ್ಯಗಳ ಮೂಲಸ್ಥಾನ ಆಗಿರಬೇಕೆಂದು ಬಹು ಜನರ ಅಭಿಪ್ರಾಯ. ಈ ಸಸ್ಯವನ್ನು ಸುಮಾರು 75-80 ವರ್ಷಗಳ ಹಿಂದೆ ಲಂಡನ್ ನಗರದ ಉದ್ಯಾನದಲ್ಲಿ ಮೊದಲು ಬೆಳೆಸಿದವರು ವರ್ಗೀಕರಣ ಶಾಸ್ತ್ರಜ್ಞ ಹೂಕರ್. ಪುಷ್ಪಮಂಜರಿ ಸ್ವಲ್ಪಮಟ್ಟಿಗೆ ಗುಲಾಬಿಯಂತೆ ಕಾಣುವುದರಿಂದ ಇತ್ತೀಚೆಗೆ ಉದ್ಯಾನಗಳಲ್ಲಿ ಇದನ್ನು ಹೆಚ್ಚಾಗಿ ಬೆಳೆಸುತ್ತಿದ್ದಾರೆ. ಗುಲಾಬಿ ಸೌಂದರ್ಯದ ದೃಷ್ಟಿಯಲ್ಲಿ ಪುಷ್ಪರಾಣಿ ಎನಿಸಿಕೊಂಡರೆ, ಅಜೀಲಿಯ, ರೋಡೋಡೆಂಡ್ರಾನ್‍ಗಳು  ಪುಷ್ಪರಾಜ ಎಂಬ ಅಭಿಪ್ರಾಯವಿದೆ.
(ಎ.ಎನ್.ಎಸ್.)
(ಪರಿಷ್ಕರಣೆ: ಕೆ.ಬಿ.ಸದಾನಂದ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ